ರಾಯಚೂರು: ಬಿ.ಎಡ್. ದ್ವಿತೀಯ ಸೆಮಿಸ್ಟರ್ ಪಠ್ಯಕ್ರಮದ ಅಂಗವಾಗಿ ಜಿಲ್ಲಾ ವೀರಶೈವ ಲಿಂಗಾಯತ ಸಮಾಜದ ಆಶ್ರಯದಲ್ಲಿ ಎಚ್.ಸಿ.ಎಂ.ಎಸ್.ಕೆ. ಶಿಕ್ಷಣ ಮಹಾವಿದ್ಯಾಲಯ ಹಾಗೂ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ “ಯೋಗ ಮತ್ತು ವ್ಯಕ್ತಿತ್ವ ವಿಕಸನ” ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ನವೋದಯ ಮೆಡಿಕಲ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಹಾಗೂ ಯೋಗ ತರಬೇತುದಾರರಾದ ಸಾವಿತ್ರಿ ಬಿರದಾರ್ ವಿಶೇಷ ಉಪನ್ಯಾಸ ನೀಡಿ, ಯೋಗವು ದೈಹಿಕ ಆರೋಗ್ಯದೊಂದಿಗೆ ಮಾನಸಿಕ ನೆಮ್ಮದಿ, ಏಕಾಗ್ರತೆ, ಆತ್ಮವಿಶ್ವಾಸ ಹಾಗೂ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿಯಾಗಿದೆ ಎಂದರು. ವಿದ್ಯಾರ್ಥಿಗಳು ಯೋಗಾಭ್ಯಾಸವನ್ನು ದೈನಂದಿನ ಜೀವನದ ಭಾಗವಾಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪಪ್ರಾಂಶುಪಾಲ ಡಾ. ಸಿದ್ದರಾಮಯ್ಯ ಹಿರೇಮಠ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಯೋಗ, ಶಿಸ್ತು ಹಾಗೂ ಉತ್ತಮ ಜೀವನಶೈಲಿ ಅತ್ಯಂತ ಮಹತ್ವದ್ದಾಗಿದೆ. ಯೋಗಾಭ್ಯಾಸವು ಪ್ರಶಿಕ್ಷಣಾರ್ಥಿಗಳ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ವೃದ್ಧಿಗೆ ನೆರವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಸಂಯೋಜಕ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಶಶಿಕುಮಾರ ಅವರು ಬಿ.ಎಡ್. ದ್ವಿತೀಯ ಸೆಮಿಸ್ಟರ್ ಪಠ್ಯಕ್ರಮದಲ್ಲಿ ಯೋಗ ಮತ್ತು ವ್ಯಕ್ತಿತ್ವ ವಿಕಸನದ ಮಹತ್ವ ಕುರಿತು ವಿವರಿಸಿದರು.
ಹಿರಿಯ ಉಪನ್ಯಾಸಕ ಹೇಮರೆಡ್ಡಿ ಪಾಟೀಲ ಮಾತನಾಡಿದರು. ಉಪನ್ಯಾಸಕರಾದ ವೀರಣ್ಣಗೌಡ, ಉತ್ತಪ್ಪ ಕೆ., ಶರಣಮ್ಮ, ಹಂಪಮ್ಮ, ಮಾಧುರಿ, ಈರಪ್ಪ ಸರ್ಜಾಪುರ ಸೇರಿದಂತೆ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.



