ರಾಯಚೂರು, ಅ.3: ರಾಯಚೂರು ರಿಪೋರ್ಟರ್ಸ್ ಗಿಲ್ಡ್‌ನ ಬೆಳ್ಳಿ ಮಹೋತ್ಸವದ ಸಂಭ್ರಮಕ್ಕೆ ಕ್ರೀಡಾ ಮೆರುಗು ನೀಡುವ ನಿಟ್ಟಿನಲ್ಲಿ ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪತ್ರಕರ್ತರ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಯಚೂರು ರಿಪೋರ್ಟರ್ಸ್ ಗಿಲ್ಡ್ (ಆರ್‌ಆರ್‌ಜಿ) ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಫೈನಲ್‌ನಲ್ಲಿ ಸಿರವಾರ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು ಪಂದ್ಯಾವಳಿಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, 25 ವರ್ಷಗಳ ಪಯಣ ಪೂರೈಸಿರುವ ರಿಪೋರ್ಟರ್ಸ್ ಗಿಲ್ಡ್ ಪತ್ರಿಕೋದ್ಯಮದ ಜೊತೆಗೆ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಕ್ರೀಡೆ, ಆರೋಗ್ಯ ಮತ್ತು ಸಮಾಜಸೇವೆಯಂತಹ ಚಟುವಟಿಕೆಗಳ ಮೂಲಕ ಬೆಳ್ಳಿ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಸಂತಸದ ಸಂಗತಿ ಎಂದರು.

ಸದಾ ಸುದ್ದಿ ಸಂಗ್ರಹದ ಒತ್ತಡದಲ್ಲಿರುವ ಪತ್ರಕರ್ತರಿಗೆ ಕ್ರೀಡಾ ಚಟುವಟಿಕೆಗಳು ಹೊಸ ಉತ್ಸಾಹ ನೀಡುವುದರ ಜೊತೆಗೆ ಪರಸ್ಪರ ಸ್ನೇಹ, ಸಹಕಾರ ಹಾಗೂ ಬಾಂಧವ್ಯ ವೃದ್ಧಿಸಲು ಸಹಕಾರಿಯಾಗುತ್ತವೆ. ಈ ತಿಂಗಳ ಅಂತ್ಯದಲ್ಲಿ ನಡೆಯಲಿರುವ ಗಿಲ್ಡ್‌ನ ಬೆಳ್ಳಿ ಮಹೋತ್ಸವ ಕಾರ್ಯಕ್ರಮಕ್ಕೆ ಅಗತ್ಯ ಸಹಕಾರ ನೀಡಲಾಗುವುದು. ರಾಯಚೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನವನ್ನೂ ಎಲ್ಲರೂ ಒಗ್ಗಟ್ಟಿನಿಂದ ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ಶಾಸಕ ಬಸನಗೌಡ ದದ್ದಲ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ ತಂಡಗಳಿಗೆ ಶುಭಕೋರಿ, ಕ್ರೀಡಾಸ್ಫೂರ್ತಿಯಿಂದ ಪಂದ್ಯಗಳಲ್ಲಿ ಭಾಗವಹಿಸುವಂತೆ ಹಾರೈಸಿದರು.

ಪಂದ್ಯಾವಳಿಯ ಆರಂಭದಿಂದಲೇ ವಿವಿಧ ತಾಲೂಕುಗಳ ಪತ್ರಕರ್ತರ ತಂಡಗಳ ನಡುವೆ ರೋಚಕ ಪೈಪೋಟಿ ಕಂಡುಬಂತು. ಕವಿತಾಳ ಮತ್ತು ಸಿರವಾರ ತಂಡಗಳ ನಡುವಿನ ಪಂದ್ಯದಲ್ಲಿ ಕವಿತಾಳ ಗೆಲುವು ಸಾಧಿಸಿದರೆ, ಮಾನ್ವಿ ಪತ್ರಕರ್ತರ ತಂಡದ ವಿರುದ್ಧ ಸಿರವಾರ ಜಯ ದಾಖಲಿಸಿತು. ಮತ್ತೊಂದು ಪಂದ್ಯದಲ್ಲಿ ರಾಯಚೂರಿನ ಎರಡನೇ ತಂಡವನ್ನು ಸೋಲಿಸಿದ ಲಿಂಗಸುಗೂರು ತಂಡ ಸೆಮಿಫೈನಲ್ ಪ್ರವೇಶಿಸಿತು.

ಮೊದಲ ಸೆಮಿಫೈನಲ್‌ನಲ್ಲಿ ರಾಯಚೂರು ಆರ್‌ಆರ್‌ಜಿ ಹಾಗೂ ಕವಿತಾಳ ತಂಡಗಳು ಮುಖಾಮುಖಿಯಾದವು. ಮೊದಲು ಬ್ಯಾಟಿಂಗ್ ಮಾಡಿದ ಕವಿತಾಳ ತಂಡ ನಿಗದಿತ 8 ಓವರ್‌ಗಳಲ್ಲಿ 94 ರನ್ ಕಲೆಹಾಕಿ ರಾಯಚೂರು ತಂಡಕ್ಕೆ 95 ರನ್‌ಗಳ ಗುರಿ ನೀಡಿತು. ಗುರಿ ಬೆನ್ನತ್ತಿದ ರಾಯಚೂರು ತಂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ 6.4 ಓವರ್‌ಗಳಲ್ಲಿ 97 ರನ್ ಗಳಿಸಿ ಫೈನಲ್‌ಗೆ ಪ್ರವೇಶಿಸಿತು.

ಎರಡನೇ ಸೆಮಿಫೈನಲ್‌ನಲ್ಲಿ ಸಿರವಾರ ಮತ್ತು ಲಿಂಗಸುಗೂರು ತಂಡಗಳು ಸೆಣಸಿದವು. ಮೊದಲು ಬ್ಯಾಟಿಂಗ್ ಮಾಡಿದ ಸಿರವಾರ ತಂಡ 49 ರನ್ ಗಳಿಸಿತು. ಗುರಿ ಬೆನ್ನತ್ತಿದ ಲಿಂಗಸುಗೂರು ತಂಡ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದರೂ ನಂತರ ವಿಕೆಟ್‌ಗಳನ್ನು ಕಳೆದುಕೊಂಡು 45 ರನ್‌ಗಳಿಗೆ ಸೀಮಿತವಾಯಿತು. ಇದರೊಂದಿಗೆ ಸಿರವಾರ ತಂಡ ಫೈನಲ್‌ಗೆ ಲಗ್ಗೆ ಇಟ್ಟಿತು.

ಫೈನಲ್‌ನಲ್ಲಿ ರಾಯಚೂರು ಆರ್‌ಆರ್‌ಜಿ ಮತ್ತು ಸಿರವಾರ ತಂಡಗಳ ನಡುವೆ ಪ್ರಶಸ್ತಿಗಾಗಿ ಹಣಾಹಣಿ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ಸಿರವಾರ ತಂಡ ನಿಗದಿತ 5 ಓವರ್‌ಗಳಲ್ಲಿ 38 ರನ್ ಗಳಿಸಿತು. ರಾಯಚೂರು ತಂಡದ ಭೀಮೇಶ್ ಪೂಜಾರ್ ಮೂರು ವಿಕೆಟ್ ಪಡೆದು ಸಿರವಾರ ತಂಡದ ರನ್ ಗಳಿಕೆಗೆ ಕಡಿವಾಣ ಹಾಕಿದರು.

ಗುರಿ ಬೆನ್ನತ್ತಿದ ರಾಯಚೂರು ತಂಡ ನಾಲ್ಕು ಓವರ್‌ಗಳಲ್ಲಿಯೇ ಗೆಲುವಿನ ಗುರಿ ತಲುಪಿ 7 ವಿಕೆಟ್‌ಗಳ ಜಯ ದಾಖಲಿಸಿತು. ಶ್ರೀಕಾಂತ್ ಸಾವೂರ್ 21 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದರೊಂದಿಗೆ ರಾಯಚೂರು ರಿಪೋರ್ಟರ್ಸ್ ಗಿಲ್ಡ್ ತಂಡ ಬೆಳ್ಳಿ ಮಹೋತ್ಸವದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಯ ಚಾಂಪಿಯನ್ ಪಟ್ಟ ಅಲಂಕರಿಸಿತು.

ಗಿಲ್ಡ್ ಅಧ್ಯಕ್ಷ ವಿಜಯ ಜಾಗಟಗಲ್ ಮಾತನಾಡಿ, ಬೆಳ್ಳಿ ಮಹೋತ್ಸವದ ನೆನಪಿಗಾಗಿ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಜಿಲ್ಲೆಯ ಪತ್ರಕರ್ತರನ್ನು ಒಂದೇ ವೇದಿಕೆಗೆ ತರುವ ಕ್ರೀಡಾಕೂಟಗಳ ಜೊತೆಗೆ ಸಾಂಸ್ಕೃತಿಕ ಮತ್ತು ಸಮಾಜಮುಖಿ ಕಾರ್ಯಕ್ರಮಗಳಿಗೂ ಆದ್ಯತೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ ಆಯೋಜಿಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಪತ್ರಕರ್ತರು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದು, ಹಿರಿಯ ಮತ್ತು ಕಿರಿಯ ಪತ್ರಕರ್ತರು ಒಂದೇ ವೇದಿಕೆಯಲ್ಲಿ ಕ್ರೀಡಾಸ್ಫೂರ್ತಿಯಿಂದ ಭಾಗವಹಿಸಿದ್ದರಿಂದ ಕ್ರೀಡಾಂಗಣದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಶಾಂತಪ್ಪ, ಎಪಿಎಂಸಿ ಅಧ್ಯಕ್ಷ ಜಯವಂತರಾವ್ ಪತಂಗೆ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್. ಗುರುನಾಥ್, ಗಿಲ್ಡ್ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಹೂಗಾರ, ಜಂಟಿ ಕಾರ್ಯದರ್ಶಿ ಶ್ರೀಕಾಂತ್ ಸಾವೂರು, ನಿಕಟಪೂರ್ವ ಅಧ್ಯಕ್ಷ ಚನ್ನಬಸವಣ್ಣ, ಸದಸ್ಯರಾದ ಚನ್ನಬಸವ ಬಾಗಲವಾಡ, ಖಾನ್ ಸಾಬ್ ಮೋಮಿನ್ ಸೇರಿದಂತೆ ವಿವಿಧ ತಾಲೂಕುಗಳ ಪತ್ರಕರ್ತರು ಹಾಗೂ ಕ್ರಿಕೆಟ್ ತಂಡಗಳ ಆಟಗಾರರು ಉಪಸ್ಥಿತರಿದ್ದರು.