ಶಕ್ತಿನಗರ: ಶ್ರೀ ಸೂಗುರೇಶ್ವರ ಸಾಂಸ್ಕೃತಿಕ ನಾಟ್ಯ ಕಲಾ ಬಳಗ, ದೇವಸುಗೂರು ವತಿಯಿಂದ ಸೆ.15ರಂದು ಸಂಜೆ 7.30ಕ್ಕೆ ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ‘ಶಿವಶರಣ ಕಂಬಳಿ ನಾಗಿದೇವ’ ಭಕ್ತಿ ಪ್ರಧಾನ ನಾಟಕವನ್ನು ಯಶಸ್ವಿಯಾಗಿ ಪ್ರದರ್ಶಿಸಲಾಯಿತು.
ನಾಟಕ ಕಾರ್ಯಕ್ರಮವನ್ನು ಆರ್ಟಿಪಿಎಸ್ ಶಕ್ತಿನಗರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಆರ್. ರಮೇಶ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಶ್ರೀ ಸೂಗುರೇಶ್ವರ ಸಾಂಸ್ಕೃತಿಕ ನಾಟ್ಯ ಕಲಾ ಬಳಗವು ಪ್ರತಿವರ್ಷ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ನಾಟಕಗಳನ್ನು ಆಯೋಜಿಸುವ ಮೂಲಕ ಕಲಾ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇಂದಿನ ಆಧುನಿಕ ಯುಗದಲ್ಲಿ ಭಕ್ತಿ ಪ್ರಧಾನ ನಾಟಕಗಳ ಪ್ರದರ್ಶನ ನಡೆಯುತ್ತಿರುವುದು ಸಂತಸದ ಸಂಗತಿ. ಇತ್ತೀಚಿನ ದಿನಗಳಲ್ಲಿ ನಾಟಕ ಹಾಗೂ ಬಯಲಾಟದಂತಹ ಸಾಂಪ್ರದಾಯಿಕ ಕಲಾ ಪ್ರಕಾರಗಳು ಕ್ರಮೇಣ ಕಣ್ಮರೆಯಾಗುತ್ತಿದ್ದು, ಅವುಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಜೀವಂತವಾಗಿಡಲು ಇಂತಹ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯವಿದೆ. ನಮ್ಮ ನಾಡಿನ ಸಾಂಸ್ಕೃತಿಕ ಕಲೆಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವೈಟಿಪಿಎಸ್ ಪ್ರಭಾರಿ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಕೆ. ರಾಜು, ಶಕ್ತಿನಗರದ ಡಿಜಿಎಂ ಎಚ್ಆರ್ಡಿ ಚೆನ್ನಮ್ಮ, ಆರ್ಟಿಪಿಎಸ್ ನೌಕರರ ಸಂಘದ ಅಧ್ಯಕ್ಷ ಭರಮರೆಡ್ಡಿ, ಉಪಾಧ್ಯಕ್ಷೆ ಸೂಗಮ್ಮ, ರಘುನಾಥ್ ರೆಡ್ಡಿ, ಶ್ರೀ ಸೂಗುರೇಶ್ವರ ಸಾಂಸ್ಕೃತಿಕ ನಾಟ್ಯ ಕಲಾ ಬಳಗದ ಅಧ್ಯಕ್ಷ ಅಣಿ ವೀರಯ್ಯಸ್ವಾಮಿ ಸೇರಿದಂತೆ ಆರ್ಟಿಪಿಎಸ್ ನೌಕರರ ಸಂಘ ಹಾಗೂ ಕೆಪಿಸಿ ನೌಕರರ ಸಂಘದ ಪದಾಧಿಕಾರಿಗಳು ಮತ್ತು ಇತರರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ‘ಶಿವಶರಣ ಕಂಬಳಿ ನಾಗಿದೇವ’ ಭಕ್ತಿ ಪ್ರಧಾನ ನಾಟಕ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಕಲಾವಿದರ ಅಭಿನಯ ಹಾಗೂ ನಾಟಕದ ಭಕ್ತಿ ಪ್ರಧಾನ ಕಥಾವಸ್ತು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.



