ರಾಯಚೂರು, ಸೆ.26: ರಾಯಚೂರು ರಿಪೋರ್ಟರ್ಸ್ ಗಿಲ್ಡ್‌ನ ಬೆಳ್ಳಿ ಮಹೋತ್ಸವದ ಅಂಗವಾಗಿ ಪತ್ರಕರ್ತರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ನಡುವೆ ಆಯೋಜಿಸಲಾದ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿಗೆ ಜಿಲ್ಲಾಧಿಕಾರಿ ಎಸ್. ಪೂವಿತಾ ಬ್ಯಾಟ್ ಬೀಸುವ ಮೂಲಕ ಚಾಲನೆ ನೀಡಿದರು.

ನಗರದ ಪೊಲೀಸ್ ಮೈದಾನದಲ್ಲಿ ರಿಪೋರ್ಟರ್ಸ್ ಗಿಲ್ಡ್ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಿತ್ಯದ ಆಡಳಿತಾತ್ಮಕ ಹಾಗೂ ವೃತ್ತಿಪರ ಒತ್ತಡದ ನಡುವೆ ಅಧಿಕಾರಿಗಳು ಮತ್ತು ಪತ್ರಕರ್ತರು ಒಂದೆಡೆ ಸೇರಲು ಇಂತಹ ಕ್ರೀಡಾಕೂಟಗಳು ಉತ್ತಮ ವೇದಿಕೆಯಾಗುತ್ತವೆ. ಪರಸ್ಪರ ಮಾಹಿತಿ ವಿನಿಮಯ ಮತ್ತು ಸೌಹಾರ್ದ ಸಂಬಂಧ ವೃದ್ಧಿಸುವುದರ ಜೊತೆಗೆ ದೈಹಿಕ ಹಾಗೂ ಮಾನಸಿಕ ಸದೃಢತೆಗೂ ಕ್ರೀಡೆ ಸಹಕಾರಿಯಾಗಿದೆ ಎಂದರು.

ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠದ ಆಯುಕ್ತ ಜುಬಿನ್ ಮೊಹಾಪಾತ್ರ ಮಾತನಾಡಿ, ರಿಪೋರ್ಟರ್ಸ್ ಗಿಲ್ಡ್ ಕಳೆದ 25 ವರ್ಷಗಳಿಂದ ಪತ್ರಕರ್ತರಿಗಾಗಿ ವಿವಿಧ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಬೆಳ್ಳಿ ಮಹೋತ್ಸವದ ಸಂದರ್ಭದಲ್ಲಿ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿರುವುದು ಸಂತಸದ ಸಂಗತಿ. ನಗರಸಭೆ ನೀಡಿದ ಜಾಗದಲ್ಲಿ ಗಿಲ್ಡ್ ಕಟ್ಟಡ ನಿರ್ಮಾಣಗೊಂಡಿದ್ದು, ಗಿಲ್ಡ್ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘ ಪತ್ರಕರ್ತರ ಪ್ರಾತಿನಿಧಿಕ ಸಂಸ್ಥೆಗಳಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.

ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಹಕಾರದೊಂದಿಗೆ ಪತ್ರಕರ್ತರ ಸಂಘಟನೆಗಳು ಬೆಳೆದು ಬಂದಿವೆ. ವೃತ್ತಿಜೀವನದ ಒತ್ತಡದಿಂದ ಹೊರಬಂದು ಪರಸ್ಪರ ಆತ್ಮೀಯತೆ ಬೆಳೆಸಿಕೊಳ್ಳಲು ಕ್ರೀಡೆ ಉತ್ತಮ ಅವಕಾಶ ಒದಗಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಮಾತನಾಡಿ, ಗಿಲ್ಡ್‌ನ 25 ವರ್ಷಗಳ ಸಂಭ್ರಮದಲ್ಲಿ ಅಧಿಕಾರಿಗಳು ಹಾಗೂ ಪತ್ರಕರ್ತರನ್ನು ಒಟ್ಟುಗೂಡಿಸಿ ಕ್ರೀಡಾಕೂಟ ಆಯೋಜಿಸಿರುವುದು ಶ್ಲಾಘನೀಯ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕುಮಾರ ಕಾಂದೂ ಮಾತನಾಡಿ, ಕ್ರೀಡಾ ಚಟುವಟಿಕೆಗಳು ಮನರಂಜನೆಯೊಂದಿಗೆ ವೃತ್ತಿಪರ ಒತ್ತಡವನ್ನು ಕಡಿಮೆ ಮಾಡಲು ನೆರವಾಗುತ್ತವೆ. ವಿಶೇಷವಾಗಿ ಸದಾ ಸುದ್ದಿಯ ಒತ್ತಡದಲ್ಲಿರುವ ಮಾಧ್ಯಮ ಪ್ರತಿನಿಧಿಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ನೀಡಬೇಕು ಎಂದು ಸಲಹೆ ನೀಡಿದರು.

ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಾಪಾತ್ರ ಮಾತನಾಡಿ, ಆಡಳಿತ ವ್ಯವಸ್ಥೆಯಲ್ಲಿ ಮಾಧ್ಯಮದ ಪಾತ್ರ ಮಹತ್ವದ್ದಾಗಿದೆ. ಆಡಳಿತದ ಉತ್ತಮ ಕಾರ್ಯಗಳಿಗೆ ಎಲ್ಲರ ಸಹಕಾರ ದೊರೆತಾಗ ಸಾರ್ವಜನಿಕರಿಗೆ ಪರಿಣಾಮಕಾರಿಯಾಗಿ ಸೌಲಭ್ಯಗಳನ್ನು ತಲುಪಿಸಲು ಸಾಧ್ಯವಾಗುತ್ತದೆ. ಕ್ರೀಡೆಯನ್ನು ಸ್ಪರ್ಧೆಯಾಗಿ ಮಾತ್ರವಲ್ಲದೆ ಸಂತೋಷದಿಂದ ಅನುಭವಿಸಬೇಕು ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್. ಗುರುನಾಥ್ ಮಾತನಾಡಿ, ಕಳೆದ 25 ವರ್ಷಗಳಲ್ಲಿ ಪತ್ರಕರ್ತರಿಗಾಗಿ ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಸದಾ ಸುದ್ದಿಯ ಬೆನ್ನತ್ತುವ ಪತ್ರಕರ್ತರು ಇಂತಹ ಕ್ರೀಡಾಕೂಟಗಳಲ್ಲಿ ಕ್ರೀಡಾಸ್ಫೂರ್ತಿಯಿಂದ ಪಾಲ್ಗೊಂಡು ಮನಸ್ಸಿಗೆ ವಿಶ್ರಾಂತಿ ನೀಡಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ರಿಪೋರ್ಟರ್ಸ್ ಗಿಲ್ಡ್ ಅಧ್ಯಕ್ಷ ವಿಜಯ ಜಾಗಟಗಲ್ ಮಾತನಾಡಿ, ಬೆಳ್ಳಿ ಮಹೋತ್ಸವದ ಅಂಗವಾಗಿ ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ರಾಜ್ಯಮಟ್ಟದ ಕಥೆ ಹಾಗೂ ಕವನ ಸ್ಪರ್ಧೆಗಳನ್ನು ಆಯೋಜಿಸುವುದರೊಂದಿಗೆ ಜಿಲ್ಲೆಯ ವಿವಿಧ ಹೋರಾಟಗಳ ಕುರಿತು ಪುಸ್ತಕ ಹೊರತರಲು ಸಿದ್ಧತೆ ನಡೆಸಲಾಗಿದೆ. ಅದರ ಮುಂದುವರಿದ ಭಾಗವಾಗಿ ಪತ್ರಕರ್ತರು ಮತ್ತು ಅಧಿಕಾರಿಗಳ ನಡುವೆ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದಯ್ಯ ಕುಕನೂರು, ನಿಕಟಪೂರ್ವ ಅಧ್ಯಕ್ಷ ಚೆನ್ನಬಸವಣ್ಣ, ರಿಪೋರ್ಟರ್ಸ್ ಗಿಲ್ಡ್ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಹೂಗಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಹಿರಿಯ-ಕಿರಿಯ ಪತ್ರಕರ್ತರು ಭಾಗವಹಿಸಿದ್ದರು. ವೆಂಕಟೇಶ ಹೂಗಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.