ರಾಯಚೂರು: ನಗರದ ಅಲ್ಲಮಪ್ರಭು ಕಾಲೋನಿಯ ಹೊರವಲಯದಲ್ಲಿ ಅಕ್ರಮವಾಗಿ ಒಣ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಮಾರ್ಕೆಟ್ ಯಾರ್ಡ್ ಠಾಣೆ ಪೊಲೀಸರು ಬಂಧಿಸಿ, ಅವರಿಂದ 1,810 ಗ್ರಾಂ ಒಣ ಗಾಂಜಾ ಜಪ್ತಿ ಮಾಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಅರುಣಾಂಗ್ಷು ಗಿರಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ. ಹರೀಶ್, ಪೊಲೀಸ್ ಉಪಾಧೀಕ್ಷಕ ಶಾಂತವೀರ ಈ. ಹಾಗೂ ಪಶ್ಚಿಮ ವೃತ್ತದ ಸಿಪಿಐ ಉಮೇಶ್ ಕಾಂಬ್ಳೆ ಅವರ ಮಾರ್ಗದರ್ಶನದಲ್ಲಿ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯ ಪಿಎಸ್ಐ ಮಹ್ಮದ್ ಇಸಾಕ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಅಕ್ರಮ ಗಾಂಜಾ ಮಾರಾಟ ಮತ್ತು ಸಾಗಾಟ ಪತ್ತೆಗಾಗಿ ತಂಡ ಕಾರ್ಯಾಚರಣೆ ನಡೆಸುತ್ತಿತ್ತು.
ಸೆ.17ರಂದು ಮಧ್ಯಾಹ್ನ ದೊರೆತ ಮಾಹಿತಿ ಮೇರೆಗೆ ಪಿಎಸ್ಐ ಮಹ್ಮದ್ ಇಸಾಕ್, ಗೆಜೆಟೆಡ್ ಅಧಿಕಾರಿ ಹಾಗೂ ಡ್ರಗ್ಸ್ ಕಂಟ್ರೋಲರ್ ಸಚಿನ್, ಸರ್ಕಾರಿ ಪಂಚರು ಮತ್ತು ಪೊಲೀಸ್ ಸಿಬ್ಬಂದಿಯೊಂದಿಗೆ ಅಲ್ಲಮಪ್ರಭು ಕಾಲೋನಿಯ ಹೊರವಲಯದಲ್ಲಿ ಕಾರ್ಯಾಚರಣೆ ನಡೆಸಿದರು.
ಈ ವೇಳೆ ಅಕ್ರಮವಾಗಿ ಒಣ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಎಲ್ಬಿಎಸ್ ನಗರದ ನಿವಾಸಿಗಳಾದ ಮೊಹ್ಮದ್ ಕೈಫ್ (20) ಹಾಗೂ ಹುಸೇನ್ ಬಾಷಾ (23) ಅವರನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ಬಳಿ ಇದ್ದ ಸುಮಾರು ₹36 ಸಾವಿರ ಮೌಲ್ಯದ 1,810 ಗ್ರಾಂ ಒಣ ಗಾಂಜಾವನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಪಿಎಸ್ಐ ಮಹ್ಮದ್ ಇಸಾಕ್, ಸಿಬ್ಬಂದಿಗಳಾದ ಮಹ್ಮದ್ ರಫೀ, ಶರಣಬಸವ, ತನಿಖಾ ಸಹಾಯಕರಾದ ಶಿವಮೂರ್ತೆಪ್ಪ, ಗುರುಸ್ವಾಮಿ ಹಾಗೂ ಜೀಪ್ ಚಾಲಕ ವೆಂಕಟೇಶ ಪಾಲ್ಗೊಂಡಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಅರುಣಾಂಗ್ಷು ಗಿರಿ ಶ್ಲಾಘಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.



